ಗದಾಫಿ, ಮೌಮರ್  1942-2011. ಲಿಬಿಯ ದೇಶದ ಅಧ್ಯಕ್ಷ (1971-77), ಲಿಬಿಯನ್ ಅರಬ್ ಜಾಮಾಹಿರಿಯ ನಾಯಕ. ಸಾರ್ಟೆ ನಗರದ ಹೊರಭಾಗದಲ್ಲಿರುವ ಹಳ್ಳಿಗಾಡಿನ ಕೃಷಿ ಪ್ರದೇಶದ ಕೈಸ್ರ್ ಅಬು ಹದಿ(ಡಿ) ಎಂಬಲ್ಲಿ 1942ರ ಜೂನ್ನಲ್ಲಿ ಜನಿಸಿದ. ಸಾರ್ಟೆ ಹತ್ತಿರ ಇರುವ ಮರುಭೂಮಿಯ ಗುಡಾರದಲ್ಲಿ ಬೆಳೆದ. ಮನೆಯಿಂದ ದೂರವಿದ್ದ ಸಬಾದ ಮುಸ್ಲಿಂ ಪ್ರಾಥಮಿಕ ಶಾಲೆಯಲ್ಲಿ ಅಭ್ಯಾಸ ಮಾಡಿದ. ಆ ಸಮಯದಲ್ಲಿ ಅರಬ್ ದೇಶಗಳಲ್ಲಿ ನಡೆಯುತ್ತಿದ್ದ ಮುಖ್ಯ ಘಟನೆಗಳು ಇವನ ಮೇಲೆ ಪ್ರಭಾವ ಬೀರಿದವು.1911ರಲ್ಲಿ ಇಟಲಿಯು ಲಿಬಿಯವನ್ನು ಸ್ವಾಧೀನ ಪಡೆಸಿಕೊಳ್ಳಲು ನಡೆಸಿದ ಯುದ್ಧದಲ್ಲಿ ಇವನ ತಾತ ಲಿಬಿಯ ಪರ ಹೋರಾಡಿ ಖೋಂನಲ್ಲಿ ಮೊದಲ ಬಲಿಯಾದ. 1948ರಲ್ಲಿ 6ವರ್ಷದ ಬಾಲಕನಾಗಿದ್ದಾಗ ತನ್ನ ಸಂಬಂಧಿಕರ ಮಕ್ಕಳೊಂದಿಗೆ ಆಟವಾಡುವಾಗ ದೂಳು ತುಂಬಿದ ಮಣ್ಣಿನಲ್ಲಿ ಯುದ್ಧದ ಸಮಯದಲ್ಲಿ ಇಟಲಿ ಸೈನ್ಯ ಹುಗಿದಿದ್ದ ಸಿಡಿಮದ್ದು ಸಿಡಿದು ಇಬ್ಬರು ಮಕ್ಕಳು ನಿಧನವಾಗಿ ಇವನಿಗೆ ತೋಳಿನಲ್ಲಿ ಗಾಯವಾಗಿತ್ತು. ಈ ಘಟನೆ ಇವನ ಮನಸ್ಸಿನಲ್ಲಿ ಇಟಲಿಯ ವಿಷಯದಲ್ಲಿ ವಿರೋಧಿ ಭಾವನೆ ಬೆಳೆಯಲು ಅಚ್ಚಳಿಯದ ಪ್ರಭಾವ ಬೀರಿತು.

ಇವನು ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾಗ ಅರಬ್ ದೇಶಗಳಲ್ಲಿ ನಡೆಯುತ್ತಿದ್ದ ಮುಖ್ಯ ಘಟನೆಗಳು ಇವನ ಮೇಲೆ ಪ್ರಭಾವ ಬೀರಿದವು. ಪ್ರಾಥಮಿಕ ಶಿಕ್ಷಣದ ಅನಂತರ ಮಿಸರಾಟದಲ್ಲಿ ಖಾಸಾಗಿಯಾಗಿ ಶಿಕ್ಷಣವನ್ನು ಪಡೆದ. ಶಿಕ್ಷಣದ ಸಮಯದಲ್ಲಿ ಇತಿಹಾಸ ಅಭ್ಯಾಸದಲ್ಲಿ ಆಸಕ್ತಿ ವಹಿಸಿದ. ಜಿಂಗಾಸಿಯ (ಬೆಂಗಾಸಿ) ರಾಯಲ್ ಲಿಬಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಅಧ್ಯಯನ ಮಾಡಿ (1961-66) ಪದವೀಧರನಾದ. ಅನಂತರ ಗ್ರೇಟ್ ಬ್ರಿಟನ್ನಿನ ಸಾಂಡ್ಹರ್ಟ್ನ ರಾಯಲ್ ಮಿಲಿಟರಿ ಅಕಾಡೆಮಿಯಲ್ಲಿ 4 ತಿಂಗಳು ಸಿಗ್ನಲ್ ಆಫೀಸರ್ ತರಬೇತಿ ಪಡೆದ. ಲಿಬಿಯ ಸೈನ್ಯದಲ್ಲಿ ಲೆಫ್ಟಿನೆಂಟ್ ಆದ. ಲಿಬಿಯ ಸೈನ್ಯದ ಎಂಜನಿಯರ್ ವಿಭಾಗದಲ್ಲಿ ನಿಯೋಜಿತ ಅಧಿಕಾರಿಯಾದ. ಇವನು ಈಜಿಪ್ಟ್ ದೇಶದ ಅಧ್ಯಕ್ಷ ಗಮಾಲ್ ಅಬ್ದುಲ್ ನಾಸೆರ್ನ ಅಭಿಮಾನಿ. 1956ರಲ್ಲಿ ಸೂಯೆಜ್ ಕಾಲುವೆ ರಾಷ್ಟ್ರೀಕರಣದ ಸಮಯದಲ್ಲಿ ಈಜಿಪ್ಟ್ ಮೇಲೆ ಬ್ರಿಟನ್, ಫ್ರಾನ್ಸ್, ಅಮೆರಿಕ ಹಾಗೂ ಇಸ್ರೇಲ್ ದೇಶಗಳು ಧಾಳಿ ನಡೆಸಿದಾಗ ಅವುಗಳ ವಿರುದ್ಧ ಈಜಿಪ್ಟ್ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ.

1967ರಲ್ಲಿ ಇಸ್ರೇಲ್ ಮತ್ತು ನೆರೆಯ ಅರಬ್ ರಾಷ್ಟ್ರಗಳಿಗೂ ನಡೆದ 6 ದಿನಗಳ ಯುದ್ಧದಲ್ಲಿ ಜೆರೂಸಲೇಂ, ಜೋರ್ಡಾನ್ ನದಿಯ ಪಶ್ಚಿಮ ದಂಡೆಯ ಪ್ರದೇಶ, ಸಿನಾಯ್ ಪ್ರದೇಶ ಮತ್ತು ಗೋಲನ್ ದಿಬ್ಬಗಳು ಇಸ್ರೇಲ್ ನ ವಶವಾದವು. ಆಗ ಅರಬರು ಸೋಲು ಅನುಭವಿಸಿದ್ದು ಇವನಿಗೆ ಮತ್ತು ಇವನ ಮಿಲಿಟರಿ ಅಕಾಡೆಮಿಯ ಸಹಪಾಠಿಗಳಿಗೆ ಮರೆಯಲಾರದ ಅನುಭವವಾಯಿತು. ಇದರಿಂದಾಗಿ ಈತ ಅರಬರ ಐಕ್ಯತೆಗೆ ಪ್ರಯತ್ನಿಸಲು ದೃಢನಿರ್ಧಾರ ಮಾಡಿದ.

1969ರ ಸೆಪ್ಟೆಂಬರ್ 1ರಂದು ಗದಾಫಿಯ ನಾಯಕತ್ವದಲ್ಲಿ ಮಿಲಿಟರಿ ಅಧಿಕಾರಿಗಳು ರಕ್ತಪಾತವಿಲ್ಲದ ಕ್ಷಿಪ್ರಕ್ರಾಂತಿಯನ್ನು ನಡೆಸಿ ಲಿಬಿಯ ರಾಜನನ್ನು ಪದಚ್ಯುತಿಗೊಳಿಸಿ ಮಿಲಿಟರಿ ಆಡಳಿತ ಸ್ಥಾಪಿಸಿದರು. ಗದಾಫಿ 1970ರಲ್ಲಿ ಮುಖ್ಯಮಂತ್ರಿಯಾದ. ಲಿಬಿಯನ್ ರಿವೆಲ್ಯೂಷನರಿ ಕಮಾಂಡ್ ಕೌನ್ಸಿಲ್ ನ ಆಣತಿಯಂತೆ ಆಡಳಿತ ನಡೆಯುತ್ತಿತ್ತು. ಇವನು ಅಧಿಕಾರ ವಹಿಸಿಕೊಂಡ ಕೂಡಲೇ ಅಮೆರಿಕ ಮತ್ತು ಬ್ರಿಟಿಷ್ ರಕ್ಷಣ ನೆಲೆಗಳನ್ನು ಮುಚಲು ಆಜ್ಞೆ ಮಾಡಿದ. ಐರೋಪ್ಯ ತೈಲೋದ್ಯಮ ಕಂಪನಿಗಳಿಗೆ ಆದಾಯದಲ್ಲಿ ಅಧಿಕಭಾಗ ಕೊಡದಿದ್ದರೆ ಮುಚ್ಚಿಸುವುದಾಗಿ ಎಚ್ಚರಿಕೆ ನೀಡಿದ. ಇವನ ಆಣತಿಯಂತೆ ಕಂಪನಿಗಳು ಶೇ.50 ರಿಂದ ಶೇ.70 ಭಾಗ ಕೊಡಲು ಒಪ್ಪಿದವು. ಗದಾಫಿ 1972ರಲ್ಲಿ ಅಧ್ಯಕ್ಷನಾದ, ಆಗ ಮೇಜರ್ ಅಬ್ದುಲ್ ಮುಖ್ಯಮಂತ್ರಿಯಾದ. ಇವನು 1971 ರಿಂದ 1977ರ ವರೆಗೆ ಈಜಿಪ್ಟ್ ಮಾದರಿಯಂತೆ ಅರಬ್ ಸೋಷಿಯಲಿಸ್ಟ್ ಯೂನಿಯನ್ ಲಿಬಿಯದ ರಾಜಕೀಯ ಪಕ್ಷವಾಗಿ ಕಾರ್ಯನಿರ್ವಹಿಸಲು ಒಪ್ಪಿಗೆ ನೀಡಿದ. 1977ರಲ್ಲಿ ಅಧಿಕಾರ ತ್ಯಜಿಸಿದ. ಲಿಬಿಯನ್ ಅರಬ್ ಜಮಾಹಿರಿಯ ನೇರವಾಗಿ ದೇಶದ ಆಡಳಿತಕ್ಕೆ ಹೊಣೆಯೆಂದು ತಿಳಿಸಿದ. ಆದರೂ ಲಿಬಿಯನ್ ರೆವೆಲ್ಯೂಷನರಿ ಕಮಾಂಡ್ ಕೌನ್ಸಿಲ್ ಆಣತಿಯಂತೆ ನಡೆಯುತ್ತಿತ್ತು.

ಇವನನ್ನು ಟೀಕೆ ಮಾಡುವವರು ಗದಾಫಿ ನಿರಂಕುಶ ಸರ್ವಾಧಿಕಾರಿ ಎಂದು ಕರೆಯುತ್ತಿದ್ದರು. ಈತ 1980ರ ದಶಕದಲ್ಲಿ ರಸಾಯನಿಕ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ. ವಿಶ್ವಸಂಸ್ಥೆಯ ಸದಸ್ಯ ದೇಶಗಳು ಲಿಬಿಯಕ್ಕೆ ನಿರ್ಬಂಧವನ್ನು ವಿಧಿಸಿದವು. 2003ರಲ್ಲಿ ಇರಾಕ್ನ ಅಧ್ಯಕ್ಷ ಸದ್ದಾಂ ಹುಸೇನ್ನನ್ನು ಬಂಧಿಸಿದ 6 ದಿನಗಳ ಅನಂತರ ಶಸ್ತ್ರಾಸ್ತ್ರಗಳನ್ನು ತ್ಯಜಿಸಿರುವುದಾಗಿ ಗದಾಫಿ ಹೇಳಿದ.

2011ರ ಫೆಬ್ರವರಿಯಲ್ಲಿ ನೆರೆಹೊರೆಯ ದೇಶಗಳಾದ ಈಜಿಪ್ಟ್ ಮತ್ತು ಟ್ಯೂನಿಷಿಯ ದೇಶಗಳಲ್ಲಿ ಕ್ರಾಂತಿಗಳು ನಡೆದಾಗ ಗದಾಫಿ ವಿರುದ್ಧವಾಗಿ ಪ್ರತಿಭಟನೆಗಳು ಪ್ರಾರಂಭವಾಗಿ ದೇಶಾದ್ಯಂತ ಹರಡಿತು. ಗದಾಫಿಗೆ ವಿರೋಧಿಯಾದ ಸೈನ್ಯದ ಭಾಗ ಬೆಂಗಾಜಿ಼ಯಲ್ಲಿ ನ್ಯಾಷನಲ್ ಟ್ರಾನ್ಸಿಷನಲ್ ಕೌನ್ಸಿಲ್ (ಎನ್.ಟಿ.ಸಿ) ಮಧ್ಯಕಾಲಿನ ಸರ್ಕಾರ ಸ್ಥಾಪಿಸಿತು. ದೇಶದಲ್ಲಿ ಹೋರಾಟ ಪ್ರಾರಂಭವಾಗಿ ಅಂತಾರಾಷ್ಟ್ರೀಯ ನ್ಯಾಯಾಲಯ ಗದಾಫಿ ಮತ್ತು ಇವನ ಕುಟುಂಬದವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಜೂನ್ 27ರಂದು ಅವರನ್ನು ಬಂಧಿಸಲು ಆಜ್ಞೆ ಹೊರಡಿಸಿತು. ನ್ಯಾಟೊ ಬಲವು ಎನ್.ಟಿ.ಸಿ.ಗೆ ಬೆಂಬಲವಾಗಿ ಹೋರಾಟ ಪ್ರಾರಂಭಿಸಿತು. ಗದಾಫಿಗೆ ವಿಧೇಯರಾದ ಸೈನ್ಯವು ಟ್ರಿಪೋಲಿ ಮೇಲಿನ ಹತೋಟಿಯನ್ನು ಆಗಸ್ಟ್ 16ರಂದು ಕಳೆದುಕೊಂಡಿತು. ಗದಾಫಿ ಸಾರ್ಟೆ ಪಟ್ಟಣದ ಮೇಲೆ ಮಾತ್ರ ಹತೋಟಿಯನ್ನು ಹೊಂದಿದ್ದ. ಸೆಪ್ಟೆಂಬರ್ 16ರಂದು ಎನ್.ಟಿ.ಸಿ. ವಿಶ್ವಸಂಸ್ಥೆಯಲ್ಲಿ ಸ್ಥಾನವನ್ನು ತುಂಬಿತು. ನ್ಯಾಟೊ ಪಡೆಗಳ ಯುದ್ಧ ವಿಮಾನಗಳು ಇವನ ಬೆಂಗಾವಲು ಪಡೆಗಳ ಮೇಲೆ ಧಾಳಿ ನಡೆಸಿದವು. ಅಕ್ಟೋಬರ್ 20ರಂದು ಸಾರ್ಟೆಯಲ್ಲಿ ಎನ್.ಎಲ್.ಎ. ಹೋರಾಟಗಾರರಿಗೆ ಈತ ಜೀವಂತವಾಗಿ ಕೈವಶವಾದಾಗ ಈತನನ್ನು ಕೊಲ್ಲಲಾಯಿತು. ಇವನ 41 ವರ್ಷಗಳ ಆಡಳಿತ ಮುಕ್ತಾಯವಾಯಿತು. 1900 ಅನಂತರ ದೀರ್ಘಕಾಲ ಆಡಳಿತ ನಡೆಸಿದ ರಾಜವಂಶಕ್ಕೆ ಸೇರಿಲ್ಲದ ನಾಲ್ಕನೆಯ ವ್ಯಕ್ತಿ ಈತ. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ